ಅಟ್ಲಾಂಟಾ
	
ಅಮೆರಿಕ ಸಂಯುಕ್ತಸಂಸ್ಥಾನದ ಜಾರ್ಜಿಯಾ ಪ್ರಾಂತದ ರಾಜಧಾನಿ; ಚಟ್ಟಹೂಚಿ ನದಿಯಿಂದ 8 ಮೈ. ದೂರದಲ್ಲಿದೆ. ಅನೇಕ ರಸ್ತೆಗಳೂ ರೈಲುಮಾರ್ಗಗಳೂ ವಿಮಾನಮಾರ್ಗಗಳೂ ಸಂಧಿಸುವ ಸ್ಥಳ; ಆದ್ದರಿಂದ ಕೈಗಾರಿಕೆಗಳ ಮತ್ತು ವಿದ್ಯಾಕೇಂದ್ರ ಆಗಿದೆ. ವಾಷಿಂಗ್‍ಟನ್ ಮತ್ತು ನ್ಯೂ ಆರ್ಲಿಯನ್ಸ್ ಪಟ್ಟಣಗಳ ಮಧ್ಯದಲ್ಲಿರುವುದರಿಂದಲೂ ಇಲ್ಲಿಂದ ಅಲಬಾಮ, ಟೆನ್ನೆಸಿ, ದಕ್ಷಿಣ ಕೆರೋಲಿನಾ ಮತ್ತು ಫ್ಲಾರಿಡಾಗಳ ನೈಸರ್ಗಿಕ ಉತ್ಪಾದನೆಗಳಿಗೆ ಸಂಪರ್ಕಸಾಧನಗಳಿರುವುದರಿಂದಲೂ ಇದರ ಪ್ರಾಮುಖ್ಯ ಹೆಚ್ಚಾಗಿ ಬೆಳೆದಿದೆ. 
	
ಹಿಂದಿನ ಪಟ್ಟಣದ ಹೆಚ್ಚು ಭಾಗ 1866ರಲ್ಲಿ ಷರ್ಮನ್ ದಾಳಿಯಿಂದ ನಾಶವಾದುದರಿಂದ, ಈಗ ಅಲ್ಲಿ ಆಧುನಿಕ ಕಟ್ಟಡಗಳೂ ಉತ್ತಮ ರಸ್ತೆಗಳೂ ಕಂಡು ಬರುತ್ತವೆ. ಈ ಪಟ್ಟಣಕ್ಕೆ ಚಟ್ಟಹೂಚಿ ನದಿಯಿಂದ ನೀರನ್ನು ಪೂರೈಸಲಾಗಿದೆ. ಇದರ ವಾಣಿಜ್ಯ ದೇಶದ ಆಗ್ನೇಯ ಪ್ರದೇಶವನ್ನೆಲ್ಲ ವ್ಯಾಪಿಸಿದೆ.							
(ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ